ವಿಷಯಕ್ಕೆ ಹೋಗಿ
ಚಿಕ್ಕೋಡಿ-"ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಈ ಭಾಗದ ಹೋರಾಟಗಾರರು ಪ್ರತಿಟನೆ, ಧರಣಿ, ಸತ್ಯಾಗ್ರಹ, ಬಂದ್ ಗಳನ್ನು ಮಾಡುತ್ತಲೇ ಬಂದಿದ್ದರೂ ಕೂಡ ಇದುವರೆಗೂ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುತ್ತಿಲ್ಲ. ಇದೀಗ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವ ಈ ಸಂದರ್ಭದಲ್ಲಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಮನವಿ ಸಲ್ಲಿಸಿತು. ಪಟ್ಟಣದ ಪ್ರವಾಸಿಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಕೆಲ ಕಾಲ ಬಸವೇಶ್ವರ ವೃತ್ತದಲ್ಲಿ ನಿಂತು ಘೋಷಣೆ ಕೂಗಿ ಮಿನಿವಿಧಾನಸೌಧಕ್ಕೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಶಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜೀವ ಬಡಿಗೇರ ಮಾತನಾಡಿ, "ಈ ಹಿಂದೆ ಹಲವು ಭಾರಿ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಹೋರಾಟ ಮಾಡಿ ಮನವಿ ಸಲ್ಲಿಸಲಾಗಿದೆ. ಆದ್ರೆ ಈ ಭಾಗದ ಜನಪ್ರತಿನಿಧಿಗಳು ಖ್ಯಾರೆ ಎನ್ನುತ್ತಿಲ್ಲ. ಈ ಭಾಗದ ಜನರ ತೊಂದರೆ ಹೇಳತೀರದ್ದಾಗಿದೆ. ಜಿಲ್ಲೆಯನ್ನಾಗಿ ಘೋಷಣೆ ಮಾಡದೇ ಹೋದಲ್ಲಿ ಮತ್ತೇ ಹೋರಾಟ ಸಮಿತಿಯು ಧರಣಿ, ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ಚಂದ್ರಕಾಂತ ಹುಕ್ಕೇರಿ ಮಾತನಾಡಿ, " ಈಗಾಗಲೇ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳ ಪ್ರಮುಖರು ಈ ಭಾಗದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದಾಗ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವುದಾಗಿ ಹೇಳುತ್ತಲೇ ಬಂದಿದ್ದು, ಎರಡೂವರೆ ದಶಕಗಳಿಂದಲೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯು ಹೋರಾಟ ಮಾಡುತ್ತಲೇ ಬಂದಿದ್ದು, ಈಗಲೂ ಕೂಡ ಚಿಕ್ಕೋಡಿ ಜಿಲ್ಲೆ ಘೋಷಣೆಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು. ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ ಚಿದಂಬರ ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಜಯ ಪಾಟೀಲ, ಸಂತೋಷ ಪೂಜೇರಿ, ಪ್ರತಾಪ ಪಾಟೀಲ, ಬಸವರಾಜ ಸಾಜನೆ, ಅಮೂಲ ನಾವಿ, ವಿಜಯ ಬ್ಯಾಳೆ, ಕುಮಾರ ಪಾಟೀಲ, ಸತ್ಯಪ್ಪ ಕಾಂಬಳೆ, ರಮೇಶ ಢಂಗೇರ, ಭೀಮು ನಾಯಕ, ಶ್ರೀಕಾಂತ ಅಸೋದೆ, ರವಿ ನಾಯ್ಕ, ರಫೀಕ ಪಠಾಣ, ಕುಮಾರ ಗುರವ, ಪರಶು ಗಾವಡೆ, ಸಚಿನ ದೊಡಮನಿ, ಕಾನಪ್ಪ ಪಾಡಕರ ಮುಂತಾದವರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು